ವರಮಹಾಲಕ್ಷ್ಮಿಹಬ್ಬ

Spread the love

ಯಾ ದೇವೀ ಸರ್ವಭೂತೇಷು ಮಾತೃರೂಪೇಣ ಸಂಸ್ಥಿತಾ|
ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ||

ಭಾರತೀಯ ಪರಂಪರೆಯಲ್ಲಿ ಎಲ್ಲಾ ಮಾಸಗಳು ಒಂದೊಂದು ರೀತಿಯ ವಿಶಿಷ್ಟತೆ ಹೊಂದಿರುವಂತೆ ಶ್ರಾವಣ ಮಾಸದ ಎಲ್ಲಾ ದಿನವೂ ದೇವರಿಗೆ ಪ್ರಿಯ! ವಿಶೇಷವಾಗಿ ಲಕ್ಷ್ಮಿ ದೇವಿಗೆ ಪ್ರಿಯವಂತೆ! ಈ ಮಾಸಪರ್ಯಂತ ಮನೆ ದೇಗುಲಗಳಲ್ಲಿ ನಿತ್ಯ ವಿಶೇಷ ಪೂಜಾ ಕೈಂಕರ್ಯಗಳು ಅನೇಕ ವಿಧದಲ್ಲಿ ನಡೆಯುತ್ತಿರುತ್ತವೆ!
ಶ್ರಾವಣ ಮಾಸದ ಹುಣ್ಣಿಮೆಗೆ ಮೊದಲು ಬರುವ ಶುಕ್ರವಾರದಂದು
ವರಮಹಾಲಕ್ಷ್ಮಿ
ಹಬ್ಬವನ್ನು ಆಚರಿಸಲಾಗುವುದು! ವರಮಹಾಲಕ್ಷ್ಮಿ ಹಬ್ಬದಂದು ಎಲ್ಲಾ ಹಬ್ಬಗಳಂತೆಯೇ ಮನೆಯನ್ನು ಸ್ವಚ್ಛಗೊಳಿಸಿ,
ಮನೆಯ ಮುಂದೆ ರಂಗೋಲಿಯಿರಿಸಿ,
ತಳಿರು ತೋರಣಗಳಿಂದ ಶೃಂಗರಿಸಿ, ಸ್ನಾನಾದಿ ಕ್ರಿಯೆ ಗಳ ನಂತರ ಶುಭ್ರ ವಸ್ತ್ರ ಧರಿಸಿ, ಪೂಜೆಗೆ ಅಣಿಮಾಡಿಟ್ಟುಕೊಳ್ಳಬೇಕು!
ಸಂಜೆ ಗೋಧೂಳಿ ಸಮಯದಲ್ಲಿ ಈ ವ್ರತ ಮಾಡುವ ವಾಡಿಕೆ ಇದೆ!

(ಲಕ್ಷ್ಮೀ ಆಗಮನ ಸಂಜೆ ಯಾದುದರಿಂದ ಪ್ರತಿದಿನ ಮುಸ್ಸಂಜೆ ವೇಳೆಯಲ್ಲಿ ಶುದ್ದಚಿತ್ತ, ಶುಭ್ರಹಸ್ತದಿಂದ
ದೇವರಿಗೆ ದೀಪವಿಟ್ಟು ಭಜನೆ ಮಾಡುವುದು ಇಂದಿಗೂ ರೂಢಿಯಲ್ಲಿದೆ!)

ಲಕ್ಷ್ಮೀ ಎಂದರೆ ಸಂಪತ್ತು
ಈ ಸಂಪತ್ತು ಯಾವ ರೂಪದ್ದಾದರೂ ಸರಿ, ಭಕ್ತರು ಬಯಸಿದ ಸಿರಿಯನ್ನು ಒದಗಿಸುವವಳೇ ಈ ವರಮಹಾಲಕ್ಷ್ಮಿ! ಲಕ್ಷ್ಮಣವತಿಯೂ, ಕಮಲದಳನೇತ್ರೆಯೂ, ಕರುಣಾಮಯಿಯೂ ಆದ ದೇವಿಯನ್ನು ಎಲ್ಲ ಸುಮಂಗಲೆಯರೂ ಅವರವರ ಪದ್ದತಿಗನುಸಾರವಾಗಿ
ಪೂಜಿಸಿದರೂ, ಅರ್ಚಿಸಿದರೂ
ಪೂಜಾ ಫಲ ಒಂದೇ ಆಗಿರುತ್ತದೆ! ಸಾತ್ವಿಕ ಭಾವವೊಂದೇ ಮುಖ್ಯ!
ಸರ್ವಸಂಪದ್ಬರಿತವಾದ, ಸರ್ವಲಕ್ಷಣಮೂರ್ತಿಯಾದ ಶ್ರೀಲಕ್ಷ್ಮಿ ದೇವಿಯನ್ನು
ವರ್ಣಾಂಲಂಕೃತ ಮಂಟಪದಲ್ಲಿರಿಸಿ, ಸುತ್ತ ರಂಗೋಲಿ ಚಿತ್ರಿಸಿ, ಇಕ್ಕೆಲಗಳಲ್ಲಿ ತುಪ್ಪ, ಎಣ್ಣೆಯ ದೀಪವನ್ನಿರಿಸಿ, ಮಂಟಪದ ಮಧ್ಯದಲ್ಲಿ ಒಂದು ಕಲಶವನ್ನು ಪ್ರತಿಷ್ಠಾಪಿಸಿ, ಮಂತ್ರೋಚ್ಛಾರಣೆಯೊಂದಿಗೆ ಪ್ರಾಣ ಪ್ರತಿಷ್ಠಾಪನೆ ಮಾಡಿ, ಹರಿದ್ರಾ ಕುಂಕುಮ
ಗಂಧ, ಚಂದನ ಗೆಜ್ಜೆವಸ್ತ್ರ
ಅಕ್ಷತೆ ಹೂವು ಪತ್ರೆಗಳಿಂದ
ದೇವಿಯ ನಾಮಗಳನ್ನು ಉಚ್ಚರಿಸುತ್ತ, ಅನೇಕ ವಿಧದ ಹೂವುಗಳಿಂದ ಅರ್ಚಿಸಿ,ಸರ್ವಾಭರಣ ಸರ್ವಾಂಗಸುಂದರಿ ಲಕ್ಷ್ಮಿ ದೇವಿಗೆ ಪಂಚಾಮೃತ, ಹೋಳಿಗೆ ಹಯಗ್ರೀವ, ಪಂಚಭಕ್ಷ,ಪರಮಾನ್ನ,
ಹಾಗೂ ನಾನಾವಿಧವಾದ ಹಣ್ಣುಗಳು, ನಾಳಿಕೇರ,ನಾಗವಲ್ಲಿ, ಪೂಗೀಫಲಗಳನ್ನು ನಿವೇದಿಸಿ, ಭಜನಪ್ರಿಯಳಾದ ದೇವಿಯನ್ನು ಹಾಡುಗಳ ಮೂಲಕ ಸಂತುಷ್ಟಗೊಳಿಸಿ
ಹಿಟ್ಟಿನಿಂದ ತಯಾರಿಸಿದ ಆರತಿಯಿಂದಲೂ, ಸುವರ್ಣ, ಹಿತ್ತಾಳೆಯ ಹರಿವಾಣಗಳಲ್ಲಿ ಚಿತ್ತಾರ ಬಿಡಿಸಿದ ಆರತಿಯಿಂದಲೂ,ಶಂಖ, ಗಂಟೆ, ಜಾಗಟೆಗಳೊಂದಿಗೆ ನೀರಾಜನವಗೈದು, ಅಷ್ಟಮುತ್ತ್ಯೈದೆಯರನ್ನು ಆಹ್ವಾನಿಸಿ,ಸಾಕ್ಷಾತ್ ಲಕ್ಷ್ಮೀದೇವಿಯೆಂದೇ ಪರಿಗಣಿಸಿ,ತಂಡುಲ,ಫಲ,
ಅರಿಶಿನ ಕುಂಕುಮ,ಗಾಜಿನಬಳೆ, ವಸ್ತ್ರ, ವೀಳ್ಯದೆಲೆ ಅಡಕೆ, ಮುಂತಾದ ಮಂಗಳದ್ರವ್ಯಗಳನ್ನೊಳಗೊಂಡ ಬಾಗಿನವನ್ನು ಅವರಿಗೆ ಕೊಟ್ಟು ಮನಸ್ಪೂರ್ವಕ ನಮಿಸಿ ಆಶೀರ್ವಾದ ಪಡೆದುಕೊಳ್ಳುವುದು
ಸಂಪ್ರದಾಯ!
ಚಿತ್ತಶುದ್ದಿಯಿಂದ, ಭಕ್ತಿ ಭಾವದಿಂದ, ಆರಾಧಿಸಿದಲ್ಲಿ,
ಶೀಘ್ರ ಶುಭಫಲ ಪ್ರದವಾಗುವುದೆಂಬ ನಂಬಿಕೆ ಇದೆ!
ಶ್ರೀ ಲಕ್ಷ್ಮಿ ದೇವಿಯು ಸಮುದ್ರ ಮಥನ ಕಾಲದಲ್ಲಿ,
ಉದ್ಭವಿಸಿ, ಶ್ರೀ ವಿಷ್ಣುವಿನ ವಕ್ಷಸ್ಥಲವನ್ನು ಅಲಂಕರಿಸಿದವಳು!
ಶ್ರೀಮನ್ನಾರಾಯಣನ ಹೃದಯನಿವಾಸಿನಿಯನ್ನು ಭಕ್ತಿ ಶ್ರದ್ಧೆಯಿಂದ ಆರಾಧಿಸಿ ಅವಳ ಅನುಗ್ರಹಕ್ಕೆ ಪಾತ್ರರಾದಲ್ಲಿ ದುಗುಡ ದುಮ್ಮಾನ, ರೋಗರುಜಿನ,
ಅಸಹನೆ, ಅಸೂಯೆಗಳೆಲ್ಲ
ದೂರವಾಗಿ, ಧನ ಧಾನ್ಯಗಳು ಸಮೃದ್ಧಿಗೊಂಡು ಭಕ್ತರ ಮನಸ್ಸು ಪ್ರಫುಲ್ಲಗೊಳ್ಳುತ್ತದೆ!

ವರಮಹಾಲಕ್ಷ್ಮಿ ಎಲ್ಲರಿಗೂ ವರದಾನವೀಯಲಿ, ಹಾಗೂ
ವೈರಿ ವೈರಸ್ ಕೊರೋನವನ್ನು ದಮನಗೊಳಿಸಲಿ! ಹಾಗೂ ನಮ್ಮ ಭಾರತದೇಶ ಶತೃರಾಷ್ಟ್ರಗಳಿಂದ ವಿಜಯಗಳಿಸಲಿ! 😊🙏

ಟಿ. ವಿ. ಶ್ರೀಮತಿ ನಾಗರಾಜ್
ಕೊಪ್ಪ

About the author

kavyakaaranji

View all posts

Leave a Reply

Your email address will not be published. Required fields are marked *